ರಿಯಾಲಿಟಿ ಶೋನಲ್ಲಿ ಮಕ್ಕಳು

ಇಂದು ಮಕ್ಕಳ ಸಂಗೀತ ಕಾರ್ಯಕ್ರಮ ನೋಡುತಿದ್ದೆ.

ಟೀವಿಯಲ್ಲಿ ರಿಯಾಲಿಟಿ ಶೋಗಳು ಭಾಗವಹಿಸುವ ಮಕ್ಕಳ ವಿದ್ಯಾಭ್ಯಾಸ ಹಾಳು ಮಾಡುತ್ತದೆ ಮತ್ತು ಅವರ ಮನಸ್ಸು ಅನಗತ್ಯ ಒತ್ತಡಕ್ಕೊಳಗಾಗುತ್ತದೆ ಎಂದು ದೂರುತ್ತಾರೆ.

ಯಾವುದೇ ವಿಷಯವಾಗಲಿ ನಾವು ಉಪಯೋಗಿಸುವ ರೀತಿ ಮುಖ್ಯ. ಎಷ್ಟು ಪ್ರತಿಭಾನ್ವಿತ ಬಡ ಮಕ್ಕಳಿಗೆ ಈ ಕಾರ್ಯಕ್ರಮದಿಂದ ಅನುಕೂಲವಾಗಿದೆ. ನೃತ್ಯ ಅಥವಾ ಸಂಗೀತ ಪ್ರತಿಭೆ ಸಣ್ಣ ಮಕ್ಕಳಿದ್ದಾಗಲೇ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಈ ಕಾರ್ಯಕ್ರಮಗಳು ಬಹಳ ಬೇಗ ಪ್ರಸಿದ್ಧಿ ಪಡೆದಿವೆ.

ಇಂತಹ ಕಾರ್ಯಕ್ರಮಗಳಲ್ಲಿ  ಬಾಗವಹಿಸುವ ಮಕ್ಕಳಲ್ಲಿ, ಮನೋಬಲ ಹೆಚ್ಚುತ್ತದೆ, ಅವರ ಸಾಧನೆಗೆ ಒಳ್ಳೆಯ ಶಿಕ್ಷಣ, ಗುರಿ ಹಾಗೂ ಅದನ್ನು ತಲುಪಲು ಬೇಕಾದ ಸಾಮಗ್ರಿಗಳು, ಸಹಾಯಗಳೂ ಸಿಗುತ್ತದೆ.

ಉದಾಹರಣೆಗೆ ಜಿಟೀವಿ ಕನ್ನಡ ವಾಹಿನಿಯನ್ನು ವೀಕ್ಷಿಸುವಾಗ ಹನು ಮಂತಣ್ಣನನ್ನು ನೋಡುವಾಗ ಎಷ್ಟು ಸಂತೋಷವಾಗುತ್ತದೆ . ಯಾವುದೋ ಮೂಲೆಯಲ್ಲಿ ಇದ್ದ ಅನಾಮಿಕ ಕಲಾವಿದರಿಗೆ ಹೀಗೆ ಪ್ರಚಾರ ಸಿಗುತ್ತದೆ ಎಂದಾಗ ಎಷ್ಟು ಹೆಮ್ಮೆ ಎನಿಸುತ್ತದೆ. 

ಒಬ್ಬ ಕುರಿ ಕಾಯುವ, ಲಂಬಾಣಿ ಹುಡುಗ ಈ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ತಿಳಿದಾಗ ಅನೇಕರಿಗೆ ಅದೇ ಸ್ಪೂರ್ತಿ.

ಇದರಲ್ಲಿ ಈ ಹುಡುಗನ ಪರಿಶ್ರಮ ಮರೆಯುವಂತಿಲ್ಲ. ದಾರಿಯಲ್ಲಿ ನಾವು ನಡೆಯಬೇಕು, ಕೊನೆಯವರೆಗೂ ಕೈ ಹಿಡಿದು ನಡೆಸಲು ಯಾರಿಗೂ ಸಾಧ್ಯವಿಲ್ಲ. ಈ ಹಿಂದೆ ಒಂದು ದುರಂತ ಸಂಭವಿಸಿದೆ ಎಂದು ಎಲ್ಲಾ ರಿಯಾಲಿಟಿ ಶೋ ಒಂದೇ ಎಂಬ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಕತ್ತಿಯನ್ನು ಕೊಲೆ ಮಾಡಲೂ ಬಳಸಬಹುದು, ಹಣ್ಣು ಹೆಚ್ಚಲೂ ಬಳಸಬಹುದು.

ಈಗಿನ ಮಕ್ಕಳು ಯಾವುದೇ ಗುರಿ ಇಲ್ಲದೆ, ಇಡೀ ದಿನ ಫೋನ್, ಟೀವಿ, ಕಂಪ್ಯೂಟರ್ ಮುಂದೆ ಕುಳಿತು, ಸಮಯ, ಆರೋಗ್ಯ ಹಾಳು ಮಾಡಿ ಕೊಳ್ಳುವುದು ಹೆಚ್ಚುತ್ತಿದೆ. ಹಾಗಾಗಿ ಪಾಲಕರು ಮಕ್ಕಳನ್ನು ಇತರೆ ಹವ್ಯಾಸಗಳ ತರಗತಿಗಳಿಗೆ ಕಳುಹಿಸಿ , ಪ್ರೋತ್ಸಾಹಿಸುತ್ತಾರೆ.

ಇಂತಹ ಕಾರ್ಯಕ್ರಮಗಳನ್ನು ನೋಡುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನಾವು ಕಷ್ಟ ಪಟ್ಟು ಗುರಿ ಮುಟ್ಟಲು ದಾರಿ ಇದೆ, ಎನ್ನುವ ಧೈರ್ಯ ಮೂಡುತ್ತದೆ. ಅವರು ದೊಡ್ಡವರಾದ ಮೇಲೆ ಮುಂದಿನ ಗುರುಗಳಾಗಿ ಇನ್ನೂ ಹೆಚ್ಚು ಚೆನ್ನಾಗಿ ಈ ಪರಂಪರೆ ಮುಂದುವರೆಸಿಕೊಂಡು ಹೋಗಬಹುದು.

ಈಗಿನ ಮಕ್ಕಳಂತೂ ಇನ್ನೂ ಚುರುಕು. ಹೊಸ ವಿಷಯ ಏನೇ ಇರಲಿ ಮೊಬೈಲ್ ಫೋನ್, ಟೀವಿ ನೋಡುತ್ತಾ ಎಲ್ಲಾ ಕಲಿಯುತ್ತಾರೆ. ಮಕ್ಕಳಿಗೆ  ಅದು ಮಾಡಬೇಡಿ ಇದು ಮಾಡಬೇಡಿ ಅಂತ ಹೇಳುವ ಬದಲು ಅವರಿಗೆ ಆಸಕ್ತಿ ಇರುವ ವಿಷಯ ತಿಳಿದು ಅದರಲ್ಲಿ ಮುಂದುವರೆಯಲು ಪ್ರೋತ್ಸಾಹಿಸಿ. ನೀವು ಪಕ್ಕದಲ್ಲಿ ಇದ್ದು ಅವರನ್ನು ಮುಂದೆ ತರುವುದರ ಮೂಲಕ ಅವರ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ.

ಬರೀ ವಿಧ್ಯಾಭ್ಯಾಸ ಒಂದೇ ಮಕ್ಕಳ ಪೂರ್ಣ ವಿಕಾಸ ಮಾಡುವುದಿಲ್ಲ.

Leave a Reply

Your email address will not be published. Required fields are marked *